ಪರ್ಯಾಯದ್ವೀಪಿಯ ಯುದ್ಧ - 
	1808-14 ಯೂರೋಪಿನ ನೈಋತ್ಯ ಭಾಗದಲ್ಲಿರುವ ಐಬಿರಿಯನ್ ಪರ್ಯಾಯದ್ವೀಪದಲ್ಲಿ ಬ್ರಿಟನ್ನಿನ ವಿರುದ್ಧ ಫ್ರಾನ್ಸ್ ನಡೆಸಿದ ಯುದ್ಧ (ಪೆನೆನ್ಸುಲಾರ್ ವಾರ್). ಇದರಲ್ಲಿ ಸ್ಪ್ಯಾನಿಷ್ ಮತ್ತು ಪೋರ್ಚ್‍ಗೀಸ್ ಸ್ವಯಂಸೇವಕ ಪಡೆಗಳು ಬ್ರಿಟಿಷರ ಪರವಾಗಿ ಹೋರಾಡಿದವು.											(ಕೆ.ಎನ್.ಎ.)

	ಸ್ಪೇನು ಫ್ರಾನ್ಸಿನ 1ನೆಯ ನೆಪೋಲಿಯನ್ನನಿಗೆ ಅಧೀನವಾಗಿ, ಪೋರ್ಚುಗಲ್ಲನ್ನು ಫ್ರಾನ್ಸ್ ಆಕ್ರಮಿಸಿಕೊಳ್ಳಲು 1807ರಲ್ಲಿ ಒಪ್ಪಿಗೆ ನೀಡಿತ್ತು 1808ರ ಮಾರ್ಚ್‍ನಲ್ಲಿ ಸ್ಪೇನಿನ ಅರಮನೆಯಲ್ಲಿ ಕ್ರಾಂತಿಯೊಂದು ಸಂಭವಿಸಿತು. ಫ್ರಾನ್ಸ್ ಪರವಾಗಿದ್ದ 4ನೆಯ ಚಾಲ್ರ್ಸ್ ಪದಚ್ಯುತನಾದ. ಅವನ ಮಗ 7ನೆಯ ಫರ್ಡಿನ್ಯಾಂಡ್ ಸಿಂಹಾಸನವೇರಿದ. ಸ್ಪೇನಿನ ರಾಜಧಾನಿ ಮೆಡ್ರಿಡನ್ನೂ ಇತರ ನಗರಗಳನ್ನೂ ಆಕ್ರಮಿಸಿಕೊಳ್ಳಲು ನೆಪೋಲಿಯನ್ನನಿಗೆ ಇದೇ ಒಂದು ನೆಪವಾಯಿತು. ಮೆಡ್ರಿಡ್‍ನಲ್ಲಿ ಎದ್ದ ದಂಗೆಯನ್ನು ಫ್ರೆಂಚರು ಸದೆಬಡಿದರು (ಮೆ 2). ಫ್ರೆಂಚರು 4ನೆಯ ಚಾಲ್ರ್ಸನನ್ನೂ 7ನೆಯ ಫರ್ಡಿನ್ಯಾಂಡನನ್ನೂ ಉಪಾಯದಿಂದ ಫ್ರಾನ್ಸಿಗೆ ಬರಮಾಡಿಕೊಂಡು, ಅವರು ರಾಜ್ಯತ್ಯಾಗಮಾಡುವಂತೆ ಒತ್ತಾಯ ಮಾಡಿದರು. ನೆಪೋಲಿಯನ್ನನ ಸೋದರ ಜೋಸೆಫ್ ಬೊನಾಪಾರ್ಟ್ ಸ್ಪೇನಿನ ದೊರೆಯೆಂದು ಜೂನ್ 15ರಂದು ಘೊಷಿಸಲಾಯಿತು. ಸ್ಪೇನ್ ಮತ್ತು ಪೋರ್ಚುಗಲ್ಲಿನಲ್ಲಿ ದಂಗೆಗಳಾದವು. ಮೆಡ್ರಿಡನ್ನೂ ಸಾರಗಾಸವನ್ನೂ ಸ್ಪ್ಯಾನಿಷ್ ಬಂಡಾಯಗಾರರು ವಶಪಡಿಸಿಕೊಂಡರು. ಫ್ರೆಂಚರು ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಆರ್ತರ್ ವೆಲ್‍ಸ್ಲಿಯ (ಅನಂತರ ಇವನು ವೆಲ್ಲಿಂಗ್‍ಟನ್ ಡ್ಯೂಕ್ ಆದ) ನೇತೃತ್ವದಲ್ಲಿ ಬ್ರಿಟಿಷ್ ಸೇನೆ ಪೋರ್ಚ್‍ಗಲ್ಲಿನಲ್ಲಿಳಿದು 1808 ಆಗಸ್ಟ್ 21ರಂದು ವೀಮೆರೂ ಎಂಬಲ್ಲಿ ಷೊನೋನ ನಾಯಕತ್ವದಲ್ಲಿ ಹೋರಾಡುತ್ತಿದ್ದ ಫ್ರೆಂಚ್ ಸ್ಯೆನ್ಯವನ್ನು ಸೋಲಿಸಿತು. ಸೀಂಟ್ರ ಒಡಂಬಡಿಕೆಯ ಪ್ರಕಾರ ಲಿಸ್ಬನ್ನನ್ನು ಬ್ರಿಟಿಷರಿಗೆ ಷೊನೋ ಒಪ್ಪಿಸಬೇಕಾಯಿತಲ್ಲದೆ, ತನ್ನ ಪಡೆಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಸಮ್ಮತಿಸಿದ. ಸರ್ ಜಾನ್ ಮೂರನ ಸೇನಾಪತ್ಯದಲ್ಲಿ ಬ್ರಿಟಿಷ್ ಸೇನೆ ಸ್ಪೇನಿನ ಮೇಲೆ ಆಕ್ರಮಣ ನಡೆಸಿತು. ಸ್ವತಃ ನೆಪೋಲಿಯನ್ನನೇ 2 ಲಕ್ಷ ಸೈನಿಕರೊಂದಿದೆ ಹೋರಾಡಿದ ಇದೊಂದು ದೊಡ್ಡ ಯುದ್ಧವಾಗಿ ಪರಿಣಮಿಸಿತು. ನೆಪೋಲಿಯನ್ ಮೆಡ್ರಿಡಿನ ಮೇಲೆ ದಾಳಿಮಾಡಿದ. ಲ್ಯಾನ್ ಸಾರಗೋಸವನ್ನು ವಶಪಡಿಸಿಕೊಂಡ. ಸೂಲ್ಟ್ ಮೂರ್ಸನ ಪಡೆಗಳನ್ನು ಬೆನ್ನಟ್ಟಿ ಗೆಲೀಷಿಯಕ್ಕೆ ಹೋಗಿ, ಅವರು ಆಕ್ರಮಣವನ್ನು ತೆರವು ಮಾಡುವಂತೆ ಮಾಡಿದ (ಡಿಸೆಂಬರ್ 1808-ಜನವರಿ 1809). ವೆಲಿಂಗ್ಟನ್ನನ ಕಾರ್ಯಚರಣೆಯಿಂದಾಗಿ 1809ರ ಏಪ್ರಿಲ್‍ನಿಂದ ಯುದ್ಧದ ಸ್ವರೂಪ ಬದಲಾಯಿತು. ಅವನು ಫ್ರೆಂಚರನ್ನು ಪೋರ್ಚುಗಲ್ಲಿನಿಂದ ಓಡಿಸಿದ. ಟಾಲವೆರದಲ್ಲಿ ಅವರು ಸೋತರು (1809). 1810ರಲ್ಲಿ ಅವರು ಪೊರ್ಚುಗಲ್ಲಿನ ಈಶಾನ್ಯದಲ್ಲಿರುವ ಬೂಸಾಕೂ ಪರ್ವತಪ್ರದೇಶಕ್ಕೆ ಪಲಾಯನ ಮಾಡಿದರು. ಸೂಲ್ಟ್ ಮತ್ತು ಮ್ಯಾಸೇನಾರ ಪಡೆಗಳು ಒಂದಾಗಲೂ ವೆಲಿಂಗ್‍ಟನ್ ಅವಕಾಶ ಕೊಡಲಿಲ್ಲ. ವೆಲಿಂಗ್ಟನ್ನನ ಕೈ ಈಗ ಸಂಪೂರ್ಣವಾಗಿ ಮೇಲಾಗಿತ್ತು. ಬೊನಾಪಾರ್ಟನನ್ನೂ ಫ್ರೆಂಚ್ ಸೇನಾನಿ ಷೂರ್ಡಾನನನ್ನೂ ವಿಟೋರಿಯದಲ್ಲಿ 1813ರಲ್ಲಿ ದೊರೆ ಜೋಸೆಫ್ ಪರಾಜಯಗೊಳಿಸಿ ಫ್ರಾನ್ಸಿನ ಮೇಲೆ ಏರಿಹೋದ 1814ರ ವೇಳೆಗೆ ಅವನು ದಕ್ಷಿಣ ಫ್ರಾನ್ಸಿನ ಟುಲೂಸ್ ನಗರದ ವರೆಗೂ ಹೋಗಿದ್ದ. ಅಷ್ಟರಲ್ಲಿ ನೆಪೋಲಿಯನ್ ಅಧಿಕಾರತ್ಯಾಗ ಮಾಡಿದ್ದರಿಂದ ಯುದ್ಧ ಕೊನೆಗೊಂಡಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ